ಕೇಸರಿಬೇಳೆ ಗಿಡ

ತೊಗರಿ, ಬಟಾಣಿ ಮುಂತಾದ ಗಿಡಗಳನ್ನು ಹೋಲುವ ಒಂದು ಸಸ್ಯ. (ಕುಟುಂಬ:ಲೆಗ್ಯೂಮಿನೋಸೀ, ಉಪಕುಟುಂಬ : ಪ್ಯಾಪಿಲಿಯೋನೇಸೀ, ವೈಜ್ಞಾನಿಕ ಹೆಸರು: ಲ್ಯಾತಿರಸ್ ಸೇಟಿವಸ್). ಇದು ಪಶ್ಚಿಮ ಏಷ್ಟು ಇಲ್ಲವೆ ದಕ್ಷಿಣ ಯೂರೋಪಿನ ಮೂಲನಿವಾಸಿ ಎಂದು ಹೇಳಲಾಗಿದೆ. ದನಗಳ ಮೇವಿಗಾಗಿ ಮತ್ತು ಧಾನ್ಯಕ್ಕಾಗಿ ಭಾರತ, ಇರಾನ್, ದಕ್ಷಿಣ ಯೂರೋಪು, ದಕ್ಷಿಣ ಅಮೇರಿಕ, ಮಧ್ಯಪ್ರಾಚ್ಯಗಳಲ್ಲಿ ಇದರ ಸಾಗುವಳಿ ಮಾಡುತ್ತಾರೆ. ಉತ್ತರ, ಮಧ್ಯ ಹಾಗೂ ಪಶ್ಚಿಮ ಭಾರತಗಳಲ್ಲಿ ಸುಮಾರು 40 ಲಕ್ಷ ಎಕರೆಗಳಿಗೂ ಹೆಚ್ಚಿನ ಪ್ರದೇಶಗಳಲ್ಲಿ ಇದರ ಸಾಗುವಳಿಯಾಗುತ್ತದೆ. ಇದು ಭಾರತದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯುವ ಒಟ್ಟು ಪ್ರದೇಶದ 4% ರಷ್ಟು. ಕೇಸರಿ ಬೆಳೆ ಗಿಡವನ್ನು ಬೆಳೆಯುವ ಮುಖ್ಯ ಪ್ರದೇಶಗಳು ಇವು. ಬಿಹಾರ ರಾಜ್ಯದ ಪಾಟ್ನ, ಗಯ, ಷಹಾಬಾದ್, ಮುಜಾಫರ್‍ಪುರ, ಮುeóÁಫರ್‍ಪುರ, ದರ್ಭಾಂಗ ಮತ್ತು ಮಾಂಘೀರ್ ಜಿಲ್ಲೆಗಳು, ಮಧ್ಯ ಪ್ರದೇಶದ ರಾಯಪುರ, ಬಿಲಾಸಪುರ, ಬಾಲಘಾಟ್ ಜಿಲ್ಲೆಗಳು, ಪಶ್ಚಿಮ ಬಂಗಾಳದ ಮಿಡ್ನಾಪುರ, ಮುರ್ಷಿದಾಬಾದ್, ಹೂಗ್ಲಿ ಮತ್ತು 24 ಪರಗಣ ಜಿಲ್ಲೆಗಳು, ಮಹಾರಾಷ್ಟ್ರದ ಭಂಡಾರ, ಚಂದಾ ಮತ್ತು ಪರ್ಭಾನಿ ಜಿಲ್ಲೆಗಳು. ಕೊಂಚಮಟ್ಟಿಗೆ ಉತ್ತರಪ್ರದೇಶದ ಪೂರ್ವಭಾಗ ಮತ್ತು ಅಸ್ಸಾಮಿನ ಬ್ರಹ್ಮಪುತ್ರಾ ನದಿ ಕಣಿವೆ ಮತ್ತು ಪಂಜಾಬಿನ ನದಿ ಪಾತ್ರದ ಪ್ರದೇಶಗಳಲ್ಲೂ ಬೆಳೆಸಲಾಗುತ್ತಿದೆ. ಭಾರತದ ಇತರ ಕಡೆಗಳಲ್ಲಿ ಅಲ್ಲಲ್ಲಿ ಕಳೆಯಂತೆ ಸ್ವಾಭಾವಿಕವಾಗಿಯೂ ಬೆಳೆಯುತ್ತದೆ. 
ಕೇಸರಿ ಬೇಳೆ ಗಿಡ ಸುಮಾರು 1 ಮಿ.ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಸಸ್ಯ. ಎಲೆಗಳು ಗರಿರೂಪದ ಸಂಯುಕ್ತ ಮಾದರಿಯವು; ಒಂದೊಂದರಲ್ಲೂ ಬುಡದಲ್ಲಿ ಎರಡು ಕಿರು ಎಲೆಗಳು ತುದಿಯಲ್ಲಿ ಹಲವಾರು ಅಡರು ಬಳ್ಳಿಗಳು (ಟೆಂಡ್ರಿಲ್) ಇವೆ. ಅಡರು ಬಳ್ಳಿಗಳು ಮಾರ್ಪಾಡಾದ ಕೆಲವು ಕಿರು ಎಲೆಗಳು, ಎಲೆಗಳ ಕಂಕುಳಲ್ಲಿ ಒಂಟಿ ಹೂಗಳು ಅರಳುತ್ತವೆ. ಹೂಗಳ ಬಣ್ಣ ಕೇಸರಿ; ಕೆಲವೊಮ್ಮೆ ನೀಲಿ ಇಲ್ಲವೇ ಬಿಳಿಯಾಗಿರುವುದುಂಟು. ಫಲ ಪಾಡ್ ಮಾದರಿಯದು. ಅದರ ಬೆನ್ನು ಭಾಗದುದ್ದಕ್ಕೂ ಹಬ್ಬಿದಂತೆ ರೆಕ್ಕೆಯಂತಹ ರಚನೆ ಇದೆ. ಒಳಗೆ 4-5 ಬೀಜಗಳಿವೆ. ಬೀಜಗಳ ಬಣ್ಣ ಬೂದುಮಿಶ್ರಿತ ಕಂದು ಇಲ್ಲವೇ ಹಳದಿ. ಅಲ್ಲಲ್ಲಿ ಚುಕ್ಕಿಗಳಿವೆ.

ಕೇಸರಿ ಬೇಳೆ ಗಿಡ ಎಂಥ ಮಣ್ಣಿನಲ್ಲಾದರೂ ಬೆಳೆಯಬಲ್ಲುದು. ಆದರೂ ಇದರ ಸಾಗುವಳಿಗೆ ಎರೆಭೂಮಿ ಉತ್ಕøಷ್ಟವಾದುದು. ಶುದ್ಧ ಇಲ್ಲವೇ ಮಿಶ್ರ ಬೆಳೆಯಾಗಿ ಕೃಷಿ ಮಾಡಬಹುದು. ಸಾಮಾನ್ಯವಾಗಿ ಭತ್ತದೊಂದಿಗೆ ಮಿಶ್ರಬೆಳೆಯಾಗಿ ಬೆಳೆಸುತ್ತಾರೆ. ಸಾಗುವಳಿಯ ಕಾಲ ಚಳಿಗಾಲ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಸಾಗುವಳಿ ವಿಧಾನವನ್ನನುಸರಿಸಿ ಎಕರೆಯೊಂದಕ್ಕೆ ಸುಮಾರು 5-25 ಕೆ.ಜಿ.ಬೀಜ ಬೇಕಾಗುತ್ತದೆ. ಚೆನ್ನಾಗಿ ಹದಮಾಡಿ ಸರಿಯಾಗಿ ಆರೈಕೆ ಮಾಡಿದ ಭೂಮಿಯಲ್ಲಿ ಬೆಳೆ ಬಲು ಒತ್ತಾಗಿ ಬೆಳೆದು ಕಳೆಗಿಡಗಳು ಬೆಳೆಯಲು ಅವಕಾಶ ಕೊಡುವುದಿಲ್ಲ. ಅದರೆ ಆರೈಕೆ ಸರಿಯಾಗಿಲ್ಲದ ಭೂಮಿಯಲ್ಲಿ ಕೇಸರಿ ಬೇಳೆಯನ್ನೇ ಹೋಲುವ ಮತ್ತು ಅದರದೇ ಕುಟುಂಬದ ವಿವಿಧ ಬಗೆಯ ಕಳೆಗಳು ಬೆಳೆದು ಬಿಡುತ್ತವೆ. ಕಳೆಗಳು ಎಳೆಯವಾಗಿದ್ದಾಗಲೇ ತೆಗೆದುಹಾಕಬೇಕು. ಇಲ್ಲದಿದ್ದಲ್ಲಿ ಅವುಗಳ ಕಾಳುಗಳು ಕೇಸರಿ ಬೇಳೆಯೊಂದಿಗೆ ಮಿಶ್ರವಾಗುವ ಸಂಭವವುಂಟು. ಬಿತ್ತಿದ 4-5 ತಿಂಗಳುಗಳಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಲಾರಂಭಿಸಿದಾಗ ಕೊಯ್ಯಬೇಕು. ಆ ಸಮಯದಲ್ಲಿ ಕಾಯಿಗಳು ಇನ್ನೂ ಮಾಗಿರುವುದಿಲ್ಲ. ಕಾಯಿಗಳು ಸಂಪೂರ್ಣ ಮಾಗಿಬಿಟ್ಟರೆ ಅವು ಬಿರಿದು ಕಾಳುಗಳೆಲ್ಲಾ ಉದುರಿಹೋಗುವ ಸಂಭವವಿರುತ್ತದೆ. ಕುಡುಗೋಲಿನಿಂದ ಕೊಯ್ದು ಇಲ್ಲವೇ ಗಿಡಗಳನ್ನು ಬೇರುಸಹಿತ ಕಿತ್ತು ಗುಪ್ಪೆ ಹಾಕಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಅನಂತರ ಒಕ್ಕಣಿಸಿ, ತೂರಿ ಕಾಳುಗಳನ್ನು ಬೇರ್ಪಡಿಸಲಾಗುತ್ತದೆ. ಬಿತ್ತನೆಯ ಪರಿಮಾಣ ಮತ್ತು ಕೃಷಿಯ ಆರೈಕೆಯನ್ನು ಅವಲಂಬಿಸಿ ಕೇಸರಿ ಬೆಳೆಯ ಇಳುವರಿ ಎಕರೆಯೊಂದಕ್ಕೆ 15-45 ಕೆಜಿ ವರೆಗೆ ವ್ಯತ್ಯಾಸವಾಗುತ್ತದೆ. ಜೊತೆಗೆ 20-60 ಕೆಜಿ ಮೇವು ದೊರೆಯುತ್ತದೆ. 
ಕೇಸರಿ ಬೆಳೆ ಗಿಡಕ್ಕೆ ಆಯ್ಡಿಯಮ್ ಎರಿಸೈಫಾಯ್ಡಿಸ್ ಮತ್ತು ಪೆರಾನಾಸ್ಫೂರ ಲ್ಯಾಥಿರೀಪಾಲೂಸ್ಟ್ರೀಸ್ ಎಂಬ ಶಿಲೀಂದ್ರಗಳಿಂದ ಬೂಸ್ಟು ರೋಗವು ಯೂರೋಮೈಸಿಸ್ ಎಂಬುದರಿಂದ ತುಕ್ಕು ಬೂಸ್ಟು ರೋಗವು ಫ್ಯೂಸೇರಿಯಂ ಆರ್ಥೋಸಿರಾಸ್ ಎಂಬ ಶಿಲೀಂದ್ರದಿಂದ ಬಾಡುರೋಗವು ಉಂಟಾಗುತ್ತದೆ. ಇವುಗಳಲ್ಲೆಲ್ಲ ಬಾಡುರೋಗವೇ ಅತ್ಯಂತ ಹಾನಿಕರ. ಇತ್ತೀಚೆಗೆ ಈ ರೋಗವನ್ನು ನಿರೋಧಿಸುವ ಗುಣವುಳ್ಳ ತಳಿಯೊಂದನ್ನು (ಖಿ.2-12) ತಳಿಕರಣ ಪ್ರಯೋಗಗಳಿಂದ ಪಡೆಯಲಾಗಿದ್ದು ಸಾಗುವಳಿಗೆ ಇದನ್ನೇ ಉಪಯೋಗಿಸಲಾಗುತ್ತದೆ. 

ಬೀಜಗಳ ಬಣ್ಣ ಮತ್ತು ಗಾತ್ರ ಹೂಗಳ ಬಣ್ಣ ಮತ್ತು ಕಾಯಿಗಳ ಮೇಲಿನ ಮಚ್ಚೆಗಳ ಆಧಾರದ ಮೇಲೆ ಕೇಸರಿ ಬೆಳೆ ಗಿಡವನ್ನು ಅನೇಕ ಬಗೆಗಳಾಗಿ ವಿಂಗಡಿಸಲಾಗಿದೆ. ಮಾರುಕಟ್ಟೆಗಳಲ್ಲಿ ಸುಮಾರು 56 ವಿಧದ ಕಾಳುಗಳನ್ನು ಗುರುತಿಸಬಹುದು. ಕೆಲವು ವಿಧಗಳಲ್ಲಿ ಕಾಳುಗಳು ಚಿಕ್ಕವು,  ಇನ್ನು ಕೆಲವಲ್ಲಿ ದಪ್ಪಗಾತ್ರದವು. ದಪ್ಪಗಾತ್ರದವನ್ನು ಲಾಕ್ ಎಂದು ಸಣ್ಣ ಗಾತ್ರದ ಕಾಳುಗಳನ್ನು ಲಾಖೋರಿ ಎಂದು ಕರೆಯಲಾಗುತ್ತದೆ. ಕೇಸರಿ ಬೇಳೆಯನ್ನು ಬಹಳ ಹಿಂದಿನಿಂದಲೂ ಆಹಾರವಾಗಿ ಉಪಯೋಗಿಸಲಾಗುತ್ತಿದೆ. ಬರಗಾಲದಲ್ಲಂತೂ ಇದು ಬಡವರ ಪ್ರಧಾನ ಆಹಾರ. ತೊಗರಿ ಬೇಳೆಯಂತೆ ಇದನ್ನು ಬೇಯಿಸಿ ಉಪಯೋಗಿಸುವುದಲ್ಲದೆ ಇದರಿಂದ ಚಪಾತಿ, ಮುದ್ದೆ ಮುಂತಾದವನ್ನು ಸಹ ಮಾಡುತ್ತಾರೆ. ತೊಗರಿ ಬೇಳೆಯೊಂದಿಗೆ ಕೀಳ್ಬೆರಕೆ  ಮಾಡುವುದು ಉಂಟು. ಹಿಂಡಿ, ಉಪ್ಪುಗಳೊಂದಿಗೆ ಮಿಶ್ರಮಾಡಿ ದನಗಳ ಪೌಷ್ಠಿಕ ಆಹಾರದೊಂದಿಗೆ ಬಳಸುವುದಿದೆ. ಕಾಳುಗಳಲ್ಲಿ 58.2% ಕಾರ್ಬೋಹೈಡ್ರೇಟ್, 28.2% ಪ್ರೋಟೀನು, 10.0% ತೇವಾಂಶ, 3.0% ಲೋಹಾಂಶ, 0.6% ಕೊಬ್ಬು ಇವೆ. ಇವುಗಳ ಜೊತೆಗೆ ಕ್ಯಾರೋಟಿನ್, ಬಯೋಟೀನ್, ನಿಕೋಟಿನಿಕ್ ಆಮ್ಲ, ಪ್ಯಾಂಟೋಥಿನಿಕ್ ಆಮ್ಲ, ಇನಾಸಿಟಾಲ್, ಆಸ್ಕಾರ್ಬಿಕ್ ಆಮ್ಲ ಮುಂತಾದ ವಿಟಮಿನ್‍ಗಳು ಇವೆ. ಕೇಸರಿ ಬೇಳೆ ಮಾತ್ರವಲ್ಲದೆ ಎಲೆಯನ್ನು ಸೊಪ್ಪು ತರಕಾರಿಯಾಗಿ ಬಳಸುವ ರೂಢಿ ಇದೆ. ಗಿಡವನ್ನು ದನಗಳ ಮೇವಾಗಿ ಬಳಸುತ್ತಾರೆ. ಹಸಿರಾಗಿ ಇರುವಾಗಲೇ ಗಿಡಗಳನ್ನು  ಕತ್ತರಿಸಿ ತಿನಿಸಬಹುದು, ಇಲ್ಲವೆ ಹೊಲಕ್ಕೆ ದನಗಳನ್ನು ಬಿಟ್ಟು ಮೇಯಿಸಬಹುದು. ಒಣಗಿದ ಮೇಲೂ ಇದನ್ನು ಮೇವಾಗಿ ಬಳಸುವುದುಂಟು.

ಕೇಸರಿ ಬೇಳೆ ಗಿಡದಲ್ಲಿ ಇಷ್ಟೆಲ್ಲಾ ಪೌಷ್ಠಿಕಾಂಶಗಳಿವೆ, ನಿಜ. ಆದರೆ ಇದರ ಸತತವಾದ ಸೇವನೆಯಿಂದ ಒಂದು ವಿಚಿತ್ರ ಬಗೆಯ ರೋಗ ತಲೆದೋರುತ್ತದೆ. ನರಸಂಬಂಧವಾದ ಈ ರೋಗಕ್ಕೆ ಲ್ಯಾಥಿರಿಸಂ ಎಂದು ಹೆಸರು. ಕೇಸರಿ ಬೇಳೆಯ ಬಳಕೆ ಹೆಚ್ಚಾಗಿರುವ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶದ ಪೂರ್ವಭಾಗಗಳಲ್ಲಿ ಸಾಂಕ್ರಾಮಿಕವಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಮುಂಗಾರು ಮಳೆಯ ಕಾಲದಲ್ಲಿ ಇದು ಹೆಚ್ಚು. ಈ ಜಾಡ್ಯ ತಗುಲಿದ ರೋಗಿಯ ಕಾಲುಗಳು ಪಾಶ್ರ್ವವಾಯು ಹಿಡಿದಂತಾಗಿ ಅವನ ನಡಿಗೆ ಕುಂಟಿತಗೊಳ್ಳುತ್ತದೆ. ನರಹುರಿ ರಚನಾ ವಿಕಾರಕ್ಕೆ ಒಳಗಾಗುತ್ತಾ ಹೋಗುತ್ತದೆ. ತೊಡೆ ಹಾಗೂ ಮುಂಗಾಲುಗಳ ಮಾಂಸಖಂಡಗಳು ಸೆಡೆತುಕೊಳ್ಳುತ್ತವೆ. ನಡಿಗೆ ತಟ್ಟನೆಯ ಸೆಳೆತಕ್ಕೊಳಗಾಗಿ ನಡೆಯುವಾಗ ಕಾಲುಗಳನ್ನು ಬಳಸಿ ಹಾಕಬೇಕಾಗುತ್ತದೆ. ಕ್ರಮೇಣ ಇಡೀ ಕಾಲುಗಳೇ ಸಂಪೂರ್ಣವಾಗಿ ಪಾಶ್ರ್ವರೋಗಪೀಡಿತವಾಗಿ ನಡೆಯುವುದಕ್ಕಾಗದೆ ಕೈ ಮತ್ತು ಮಂಡಿಯೂರಿ ತೆವಳಬೇಕಾಗುತ್ತದೆ. ಕಾಲುಗಳಿಗೆ ಇಷ್ಟೆಲ್ಲಾ ಕೇಡುಂಟಾದರೂ ಹೃದಯದ ಬಡಿತದಲ್ಲಿ, ರಕ್ತದ ಒತ್ತಡದಲ್ಲಿ ಮತ್ತು ಶ್ವಾಸಕೋಶಗಳಲ್ಲಿ ಯಾವಕುಂದೂ ಕಾಣುವುದಿಲ್ಲ. ಮನುಷ್ಯರಲ್ಲಿ ಮಾತ್ರವಲ್ಲದೆ ದನಕರುಗಳಲ್ಲೂ ಕುದುರೆಗಳಲ್ಲೂ ಈ ರೋಗ ಕಾಣಿಸಿಕೊಳ್ಳುತ್ತದೆ. ಕುದುರೆಗಳಲ್ಲಿ ಕಾಲುಗಳು ಮಾತ್ರವಲ್ಲದೆ ಧ್ವನಿಪೆಟ್ಟಿಗೆಯ ಸ್ನಾಯುಗಳೂ ಹಾನಿಗೊಳಗಾಗುತ್ತದೆ. ಇದರಿಂದಾಗಿ ಕುದುರೆಗಳಿಗೆ ಉಸಿರುಕಟ್ಟಿದಂತಾಗಿ ಅವು ವಿಪರೀತ ನರಳುತ್ತವೆ. ಕೆಲವೊಮ್ಮೆ ಸಾಯುವುದೂ ಉಂಟು. ಚಿಕ್ಕ ಪ್ರಾಯದ ಗಂಡಸರಲ್ಲೂ, ಗಂಡು ಪ್ರಾಣಿಗಳಲ್ಲೂ ಈ ರೋಗ ಹೆಚ್ಚು ಪ್ರಕಟಗೊಳ್ಳುತ್ತದೆ. ಲಾಖೋರಿ ಬೆಳೆಗಳಿಗಿಂತ ಲಾಕ್ ಬೆಳೆಗಳ ಬಳಕೆಯಿಂದ  ರೋಗ ಸಂಭವನೀಯತೆ ಹೆಚ್ಚು ಎಂದು ಹೇಳಲಾಗಿದೆ. ರೋಗಕಾರಕಗಳು ಬಹುಕಾಲ ಸ್ಪಷ್ಟವಾಗಿ ತಿಳಿದಿರಲಿಲ್ಲ. ಕೆಲವರ ಅಭಿಪ್ರಾಯದ ಪ್ರಕಾರ ಬೆಳೆಯಲ್ಲಿರುವ ವಿಷಪೂರಿತವಾದ ಕ್ಷಾರೀಯ ವಸ್ತುಗಳು ಇಲ್ಲವೇ ಸಾವಯವ ಫೈಟೇಟ್ ವಸ್ತುಗಳು ಇಲ್ಲವೆ ಅಮೈನ್ ವಸ್ತುಗಳು ರೋಗಕ್ಕೆ ಕಾರಣ. ಕೆಲವು ವರದಿಗಳ ಪ್ರಕಾರ ಕೇಸರಿ ಬೆಳೆಯಲ್ಲಿರುವ ಸೆಲೀನಿಯಂ ಎಂಬ ಧಾತು ದೇಹದೊಳಕ್ಕೆ ಪ್ರವೇಶಿಸಿದಾಗ ಮಿಥಿಯೋನಿನ್ ಎಂಬ ಸಂಯುಕ್ತದ ವರ್ತನಾ ಕ್ರಿಯೆಗಳಿಗೆ ಅಡ್ಡಿಯುಂಟಾಗಿ ಈ ರೋಗ ಸಂಭವಿಸುತ್ತದೆ. ಮತ್ತೆ ಕೆಲವರು ಹಸಿರು ಬೇಳೆಯನ್ನು ಉಗ್ರಾಣದಲ್ಲಿ ಶೇಖರಿಸಿಟ್ಟಾಗ ಅದರ ಮೇಲೆ ಬೆಳೆಯುವ ಬೂಸ್ಟಿನಿಂದಾಗಿ ಈ ರೋಗ ಬರುತ್ತದೆ ಎಂದು ಹೇಳುತ್ತಾರೆ. ಲ್ಯಾಥಿರಿಸಂ ಒಂದು ರೀತಿಯ ವೈರಸ್ ರೋಗವೆಂದು ಹೇಳುವುದಿದೆ. ಹೈದರಾಬಾದಿನಲ್ಲಿರುವ ಪೋಷಣಾ ಸಂಶೋಧನಾಲಯದಲ್ಲಿ ನಡೆಸಿದ ಈಚೀಚಿನ ಪ್ರಯೋಗಗಳಿಂದ ಬೇಳೆಯಲ್ಲಿ ಒಂದು ಬಗೆಯ ಜೀವಾಣುವಿಷ (ಟಾಕ್ಸಿನ್) ಇರುವುದು ಗೊತ್ತಾಗಿದೆ. ಕೋಳಿ, ಪಾರಿವಾಳ, ಕೋತಿ ಮುಂತಾದ ಪ್ರಾಣಿಗಳ ಮೇಲೆ ಈ ವಿಷವನ್ನು ಪ್ರಯೋಗಿಸಿ ಇದೇ ಲ್ಯಾಥಿರಿಸಂ ರೋಗಕ್ಕೆ ಕಾರಣವೆಂದು ಖಚಿತಪಡಿಸಲಾಗಿದೆ. ಈ ರೋಗಕ್ಕೆ ಪರಿಣಾಮಕಾರಿಯಾದ ಔಷಧಿಯನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ರೋಗದ ಪ್ರಾರಂಭದ ಹಂತಗಳಲ್ಲಿ ಪ್ರೋಸ್ಟಿಗ್ಮಿನ್ ಎಂಬ ಔಷಧಿಯ ಬಳಕೆಯಿಂದ ಇದನ್ನು ಕೊಂಚಮಟ್ಟಿಗೆ ಪರಿಹರಿಸಬಹುದಾದರೂ ಸಂಪೂರ್ಣವಾಗಿ ಗುಣಮಾಡಲಾಗುವುದಿಲ್ಲ. ಕೇಸರಿ ಬೇಳೆಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಪೌಷ್ಠಿಕ ಆಹಾರ ಸೇವನೆಯಿಂದ ರೋಗವನ್ನು ತಡೆಯಬಹುದು. ಇಪ್ಪೆ ಮರದ ಹೂವಿನೊಂದಿಗೆ ಸೇರಿಸಿ ಬೇಳೆಯನ್ನು ಉಪಯೋಗಿಸಿದರೆ ಇಲ್ಲವೇ ಬೇಳೆಯನ್ನು ಬೇಯಿಸುವ ಮೊದಲು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಟ್ಟರೆ ರೋಗದ ಅಪಾಯವನ್ನು ನಿವಾರಿಸಬಹುದು ಎಂದು ಹೇಳಲಾಗಿದೆ. ಭಾರತದ ಹಲವಾರು ಸಂಶೋಧನಾಲಯಗಳಲ್ಲಿ ನಡೆದಿರುವ ಸಂಶೋಧನೆಗಳಿಂದ ಕೇಸರಿ ಬೇಳೆಯಲ್ಲಿಯ ವಿಷವಸ್ತು ನೀರಿನಲ್ಲಿ ಕರಗುವುದರಿಂದ ಅದನ್ನು ಸುಲಭವಾಗಿ ಹೊರತೆಗೆಯಬಹುದೆಂದು ಇದರಿಂದ ಬೇಳೆ ನಿರಪಾಯಕಾರಿಯಾಗುವುದೆಂದು ಗೊತ್ತಾಗಿದೆ. ಕಾಳುಗಳಿಂದ ಸಿಪ್ಪೆಯನ್ನು ಬೇರ್ಪಡಿಸಬೇಕು. ಪಾತ್ರೆಯೊಂದರಲ್ಲಿ ನೀರನ್ನು ಚೆನ್ನಾಗಿ ಕಾಯಿಸಿ  ಅದರಲ್ಲಿ ಸಿಪ್ಪೆ ತೆಗೆದ ಕಾಳುಗಳನ್ನು ಸುಮಾರು ಒಂದು ಗಂಟೆಯಕಾಲ ನೆನೆಯಿಡಬೇಕು. (ಕಾಳುಗಳನ್ನು ಬೇಯಿಸಬಾರದು). ಇದರಿಂದ ಕಾಳಿನಲ್ಲಿನ ವಿಷವೆಲ್ಲಾ ನೀರಿಗೆ ವರ್ಗಾವಣೆಯಾಗುತ್ತದೆ. ಅನಂತರ ನೀರನ್ನು ಚೆಲ್ಲಿ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಇದರಿಂದ ಕಾಳಿನಲ್ಲಿನ ಪ್ರೋಟೀನುಗಳೆಲ್ಲ ಅಲ್ಲಿಯೇ ಉಳಿದು ವಿಷ ಮಾತ್ರ ಹೊರಟುಹೋಗುತ್ತದೆ.

ಭಾರತಸರ್ಕಾರದ ಆರೋಗ್ಯ ಸಚಿವ ಖಾತೆಯ ಆಹಾರ ಕೀಳ್ಬೆರಕೆ ಪ್ರತಿಬಂಧನ ನಿಯಮಗಳ (1955) ಪ್ರಕಾರ ಕೇಸರಿ ಬೆಳೆ ಹಾಗೂ ಅದರ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗಿದೆ.                    

  (ಎಚ್.ಎನ್.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ